ಜೀವಶಾಸ್ತ್ರದ ಬೋಧನ ಕ್ರಮ

ಜೀವನಕ್ಕೆ ಅತ್ಯಂತ ನಿಕಟವಾಗಿ ಹೆಣೆದುಕೊಂಡಿರುವ ಜೀವವಿಜ್ಞಾನದ ಪರಿಚಯ ತೀರ ಅಗತ್ಯವೆನಿಸಿದ್ದರಿಂದ ಪ್ರೌಢಶಾಲೆಯ ಪಠ್ಯವಿಷಯದಲ್ಲಿ ಅದನ್ನು ಸಾಮಾನ್ಯವಿಜ್ಞಾನದ ಒಂದು ಭಾಗವಾಗಿ ಬೋಧಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಅದರಲ್ಲಿ ಸಸ್ಯಸಾಶ್ತ್ರ, ಪ್ರಾಣಿಶಾಸ್ತ್ರ, ಮಾನವಶರೀರಶಾಸ್ತ್ರ ಈ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಆಯ್ದ ಕೆಲಕೆಲವು ಭಾಗಗಳನ್ನು ಸೇರಿಸಿದ್ದಾರೆ.

	ಜೀವವಿಜ್ಞಾನದ ಬೋಧನೆ ಇತರ ವಿಜ್ಞಾನಶಾಖೆಗಳ ಬೋಧನೆಯಂತೆ ಹಲವು ಸಾಮಾನ್ಯ ಉದ್ದೇಶಗಳನ್ನೂ ಹಲವು ವಿಶಿಷ್ಟ ಉದ್ದೇಶಗಳನ್ನೂ ಸಾಧಿಸಬೇಕು. ವೈಜ್ಞಾನಿಕ ಭಾವನೆ, ನಿಯಮ, ತತ್ತ್ವ ಮುಂತಾದವುಗಳ ಮೂಲಕ ವಿಜ್ಞಾನದ ಸಾಮಾನ್ಯ ಸ್ವರೂಪವನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡಬೇಕು; ನಿಸರ್ಗದಲ್ಲಿ ಅಡಗಿರುವ ನೀತಿನಿಯಮಗಳನ್ನು ಸ್ಪಷ್ಟಪಡಿಸಬೇಕು; ವಿಜ್ಞಾನ ವಿಷಯಗಳು ಸಮಾಜ ಜೀವನಕ್ಕೆ ಸಂಬಂಧಿಸಿರುವ ಅಂಶವನ್ನು ಪರಿಚಯ ಮಾಡಿಕೊಡಬೇಕು; ಜೀವನದಲ್ಲಿ ತಲೆದೋರುವ ಸಮಸ್ಯೆಗಳನ್ನು ವಿವೇಚಿಸಿ ವೈಜ್ಞಾನಿಕವಾಗಿ ಬಗೆಹರಿಸುವ ಸಾಮಾಥ್ರ್ಯವನ್ನು ದೊರಕಿಸಬೇಕು; ವೈಜ್ಞಾನಿಕ ಚಿತ್ರವೃತ್ತಿಯನ್ನೂ ಕ್ರಮವನ್ನೂ ರೂಢಿಸಿಕೊಡಬೇಕು; ವಿರಾಮವನ್ನು ಸದ್ವಿನಿಯೋಗಪಡಿಸಿಕೊಳ್ಳಲು ಉಪಯುಕ್ತವೆನಿಸುವ ಹವ್ಯಾಸಗಳಿಗೆ ನೆರವಾಗುವ ಜ್ಞಾನ, ಅನುಭವ ಮತ್ತು ಕೌಶಲಗಳನ್ನು ಬೆಳೆಸಬೇಕು-ಇವೆಲ್ಲ ಶಿಕ್ಷಣದ ಗುರಿಯ ಸಾಮಾನ್ಯ ಮೌಲ್ಯಗಳನ್ನು ಆಧರಿಸಿದವೇ ಆಗಿವೆ. ಜೊತೆಗೆ ಜೀವಶಾಸ್ತ್ರದ ಬೋಧನೆ ಹಲವು ವಿಶಿಷ್ಟ ಉದ್ದೇಶಗಳನ್ನೂ ಸಾಧಿಸಬೇಕು; ವ್ಯಕ್ತಿ ಮತ್ತು ಸಮಾಜದ ಬೆಳವಣಿಗೆ, ವಿಕಾಸ, ವರ್ತನೆ, ಪರಸ್ಪರ ಪರಿಣಾಮ ಇವುಗಳಿಗೆ ಸಂಬಂಧಿಸಿದಂತೆ ಜೀವಲೋಕದ ಪ್ರಧಾನ ನಿಯಮಗಳನ್ನು ಪರಿಚಯ ಮಾಡಿಕೊಡಬೇಕು; ಜೀವವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸುವುದು, ಸಂಭವವೆನಿಸುವ ಪರಿಕಲ್ಪನೆಗಳನ್ನು ಕಟ್ಟುವುದು, ಸರಿಯಾದ ಪ್ರಯೋಗಗಳನ್ನು ನಿಯೋಜಿಸಿ ನಡೆಸುವುದು, ಅಂಕಿ ಅಂಶಗಳ ರೂಪದಲ್ಲಿ ದೊರೆಯುವ ಪ್ರಯೋಗ ಫಲಿತಾಂಶಗಳನ್ನು ಸಂಸ್ಕರಿಸಿ ಅದರ ಆಧಾರದ ಮೇಲೆ ಅರ್ಥಶಾಸ್ತ್ರದ ತೀರ್ಮಾನ ಕೈಗೊಳ್ಳುವುದು ಈ ಕೌಶಲಗಳನ್ನು ಬೆಳೆಸಬೇಕು; ಜೀವವಿಜ್ಞಾನಕ್ಕೆ ಸಂಬಂಧಿಸಿದ ಪರಿವೀಕ್ಷಣೆಗಳಲ್ಲಿ ಪ್ರಮಾಣಗಳನ್ನು ಬಳಸಿಕೊಳ್ಳುವ ಮತ್ತು ಅವುಗಳ ಸೀಮಿತ ಮೌಲ್ಯ, ಸಂಭವನೀಯತೆ, ಪ್ರಾಯೋಗಿಕ ದೋಷ ಮುಂತಾದವುಗಳ ಪರಿಣಾಮವನ್ನು ಗ್ರಹಿಸುವ ಅಭ್ಯಾಸವನ್ನು ರೂಢಿಸಿಕೊಡಬೇಕು; ಪ್ರಯೋಗಾಲಯದಲ್ಲಿ ಬೇಕಾಗುವ ಯಾಂತ್ರಿಕ ಕೌಶಲ, ಸಮಸ್ಯೆಗಳನ್ನು ಬಿಡಿಸಲು ಬೇಕಾಗುವ ಪ್ರಯೋಗ ತಂತ್ರ-ಇವುಗಳ ಮೇಲೆ ಒಡೆತನ ದೊರಕಿಸಬೇಕು; ರೂಢಿಯಲ್ಲಿರುವ ನಂಬಿಕೆಗಳನ್ನೂ ಸಮಕಾಲೀನ ಹೇಳಿಕೆಗಳನ್ನೂ ಸುಮ್ಮನೆ ನಂಬದೆ ವಿಮರ್ಶಿಸಿ ಪ್ರಶ್ನಿಸಿ ನೋಡುವ ಸ್ವಭಾವವನ್ನು ಬೆಳೆಸಬೇಕು; ಜೀವವಿಜ್ಞಾನವನ್ನು ಬೆಳೆಸಿದ ವ್ಯಕ್ತಿಗಳ ಬಗ್ಗೆ ಅರಿವು ಮತ್ತು ಅಭಿಮಾನಗಳನ್ನು ಮೂಡಿಸಬೇಕು; ವೈಯಕ್ತಿಕ ಮತ್ತು ಸಾಮೂಹಿಕ ಆರೋಗ್ಯದ ಬಗ್ಗೆ ಆಸಕ್ತಿ ಮೂಡಿಸಿ ಆ ಮುಖವಾದ ಜ್ಞಾನವನ್ನು ದೊರಕಿಸಿ ಅಭ್ಯಾಸಗಳನ್ನು ರೂಢಿಸಿಕೊಳ್ಳಲು ಸಹಾಯ ಮಾಡಬೇಕು; ನಿಸರ್ಗಸಂಪತ್ತಿನ ತೀವ್ರರೀತಿಯ ವ್ಯಯ, ಜನಸಂಖ್ಯೆಯ ಅಧಿಕ್ಯ, ಅಪಾಯಕಾರಿ ರಾಸಾಯನಿಕ ವಸ್ತುಗಳ ಬಳಕೆ, ಕಾರ್ಖಾನೆ, ವಾಹನಸಂಚಾರ, ಪರಮಾಣುವಿಕಿರಣ ಮುಂತಾದ ಮಾನವನ ಚಟುವಟಿಕೆಗಳಿಂದ ಪರಿಸರದಲ್ಲಾಗುವ ಮಾಲಿನ್ಯ, ಬೇಟೆಯ ಹಂಬಲ, ಅರಣ್ಯಗಳ ನಾಶ, ವಾಣಿಜ್ಯದೃಷ್ಟಿಯಿಂದಾಗುತ್ತಿರುವ ಕೆಲವು ಪ್ರಾಣಿಗಳ ಹನನ ಮುಂತಾದವುಗಳಿಂದ ಕೆಲವು ಪ್ರಾಣಿ ಮತ್ತು ಸಸ್ಯವಂಶಗಳಿಗೊದಗುವ ಅವನತಿ-ಈ ಎಲ್ಲ ಕಾರಣಗಳಿಂದ ಇಡೀ ಜೀವವರ್ಗದ ಮೇಲಾಗಬಹುದಾದ ಅಹಿತ ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು; ನಿಸರ್ಗದ ಬಗ್ಗೆ ವಾಸ್ತವ ಪರಿಜ್ಞಾನವನ್ನು ಮೂಡಿಸಿ, ಅದಕ್ಕೆ ಅನುಸರಿಸಿಕೊಂಡು ಬಾಳುವುದರ ಜೊತೆಗೆ ಮಾನವವರ್ಗದ ಹಿತದಲ್ಲಿ ಅದನ್ನು ನಿಯಂತ್ರಿಸಿಕೊಳ್ಳುವ ಅಗತ್ಯವನ್ನು ತೋರಿಸಿಕೊಟ್ಟು ಅದಕ್ಕೆ ಬೇಕಾಗುವ ಸಾಹಸ, ಶಕ್ತಿ ಮತ್ತು ಪರಿಜ್ಞಾನವನ್ನು ದೊರಕಿಸಬೇಕು; ಕೊನೆಯದಾಗಿ, ಜೀವಲೋಕದಲ್ಲಿ ಮಾನವನ ಸ್ಥಾನವನ್ನೂ ಜೀವಜಡಗಳಿಗಿರುವ ಪರಸ್ಪರ ಸಂಬಂಧವನ್ನೂ ಅರಿತುಕೊಳ್ಳಲು ನೆರವಾಗಬೇಕು. ಇವೆಲ್ಲ ಜೀವವಿಜ್ಞಾನದ ಬೋಧನೆಯ ಉದ್ದೇಶಗಳಾದರೂ ಅವೆಲ್ಲ ಒಂದೇ ಪಾಠದಲ್ಲಾಗಲಿ ಒಂದೇ ತರಗತಿಯಲ್ಲಾಗಲಿ ಸಾಧನೆಯಾಗಬೇಕೆಂದು ಭಾವಿಸಬಾರದು; ಅವು ಆ ವಿಷಯದ ವ್ಯಾಸಂಗದಿಂದ ಪರಿಪಾಕಗೊಳ್ಳಬೇಕಾದ ಅಂತಿಮ ಫಲಗಳು. ತಮ್ಮ ಬೋಧನೆಯ ವಿನ್ಯಾಸವನ್ನು ರೂಪಿಸಿಕೊಳ್ಳುವಾಗಲೂ ಪಾಠಮಾಡುವಾಗಲೂ ಅಧ್ಯಾಪಕರು ಅವನ್ನು ಗಮನದಲ್ಲಿರಿಸಿಕೊಂಡು ಅವಕಾಶವಾದಂತೆ ಆ ಫಲಗಳನ್ನು ವಿದ್ಯಾರ್ಥಿಗಳಲ್ಲಿ ರೂಢಿಸುತ್ತ ಹೋಗಬೇಕು.

	ಮೇಲಿನ ಉದ್ದೇಶಗಳಲ್ಲಿ ಕೆಲವು ನಿತ್ಯಜೀವನದಲ್ಲಿ ಅವರ ಸದ್ಯದ ಜೀವನಕ್ಕೆ ಅಗತ್ಯವೆನಿಸತಕ್ಕವಾಗಿದ್ದರೆ ಮಿಕ್ಕವು ಮುಂದೆ ಪ್ರಯೋಜನಕ್ಕೆ ಬರತಕ್ಕ ಅಂಶಗಳಂತಿವೆ. ಇಷ್ಟು ಉದ್ದೇಶಗಳೂ ಪ್ರೌಢಶಾಲೆಯಲ್ಲಿ ಜೀವಶಾಸ್ತ್ರ ಬೋಧನೆಯಿಂದ ಸಾಧನೆಯಾಗುತ್ತಿಲ್ಲವೆಂಬ ಮಾತು ನಿಜ. ಈ ಪರಿಸ್ಥಿತಿಗಳಿಗೆ ಎರಡು ಕಾರಣಗಳುಂಟು; ಶಾಲೆಗಳಲ್ಲಿ ಈಗ ಬಳಕೆಯಲ್ಲಿರುವ ತೀರ ಹಳೆಯ ಕಾಲದ ಪಠ್ಯಕ್ರಮ ಮತ್ತು ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನುಳ್ಳ ತರಗತಿಗಳು.

	ಶಾಲೆಗಳಲ್ಲೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ಅನೇಕ ಕಡೆ ಹಳೆಯ, ಸಾಂಪ್ರದಾಯಿಕ ಪಠ್ಯವಿಷಯಗಳೇ ಮುಂದುವರಿಯುತ್ತಿವೆ. ಸಂಶೋಧನೆಗಳು ರೂಢಿಸಿರುವ ನೂತನ ಅಂಶಗಳು ಅಲ್ಲಿ ಸೇರಿಲ್ಲ. 

ಜೀವರಸಾಯನಕ್ಷೇತ್ರದಲ್ಲೂ ಜೀವಭೌತಶಾಸ್ತ್ರದಲ್ಲೂ ಬೆಳಕಿಗೆ ಬಂದಿರುವ ಬಹು ಮುಖ್ಯ ಅಂಶಗಳನ್ನು ಕೈಬಿಡಲಾಗಿದೆ. ಅಂಗ ಮತ್ತು ಅಂಗಾಂಶಗಳ ವ್ಯಾಸಂಗದ ಕಡೆ ಗಮನವಿತ್ತಿದೆಯೆ ಹೊರತು ಅಣ್ವಿಕ (ಮಾಲಿಕ್ಯೂಲರ್) ಮಟ್ಟದ, ಕೋಶಗಳ ಮಟ್ಟದ, ಜನಸಂಖ್ಯಾ ಮಟ್ಟದ, ಸಮುದಾಯಮಟ್ಟದ ಅಂಶಗಳನ್ನು ಅಷ್ಟಾಗಿ ಸೇರಿಸಿಲ್ಲ. ಔದ್ಯೋಗಿಕ ಪ್ರಗತಿಗೂ ಮಾನವನ ನಿತ್ಯಜೀವನದ ಸಮಸ್ಯೆಗಳಿಗೂ ಸಂಬಂಧಿಸಿರುವ ಮುಖ್ಯ ಅಂಶಗಳನ್ನೂ ಸೇರಿಸಿಲ್ಲ. ಈ ಲೋಪದೋಷಗಳು ಸರಿಪಡಬೇಕು.

ಎಲ್ಲ ದೇಶಗಳಲ್ಲೂ ಸಾರ್ವತ್ರಿಕ ಶಿಕ್ಷಣ ಆಚರಣೆಗೆ ಬಂದಂತೆ ತರಗತಿಯಲ್ಲಿ ಅಧಿಕಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಬೇಕಾಗುತ್ತಿದೆ. ಇದರ ಫಲವಾಗಿ ವೈಯಕ್ತಿಕ ಗಮನೀಯುವುದು ಅಸಾಧ್ಯವಾಗಿ ಅಧ್ಯಾಪಕರು ಪರಿಣಾಮಕಾರಿಯಾಗತಕ್ಕ ಬೋಧನಕ್ರಮವನ್ನು ಅನುಸರಿಲಾಗುತ್ತಿಲ್ಲ. ಇದರಿಂದ ಪಾಠವನ್ನು ಉಪನ್ಯಾಸದ ವಿವರಣೆಗಳನ್ನು ಕೊಟ್ಟು ಮುಗಿಸಲಾಗುತ್ತಿದೆ. ಪ್ರಾಯೋಗಿಕ ಆಧಾರಗಳನ್ನು ಒದಗಿಸಿಕೊಳ್ಳುತ್ತಿಲ್ಲ. ಅಂಗರಚನೆಯೊಡನೆ ಅಂಗಕ್ರಿಯೆಗಳನ್ನು ಹೊಂದಿಸಿಕೊಳ್ಳುತ್ತಿಲ್ಲ. 

ಅಂಗರಚನೆಯೊಡನೆ ಅಂಗಕ್ರಿಯೆಗಳನ್ನು ಹೊಂದಿಸಿಕೊಳ್ಳದಿರುವುದೂ ಶಾಸ್ತ್ರೀಯವೆನ್ನಬಹುದಾದ ಭಾವನೆಗಳನ್ನು ಸಾಧಾರಣವಾಗಿ ರೂಪಿಸದಿರುವುದೂ ಮುಖ್ಯ ದೋಷವಾಗಿದೆ. ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದಕ್ಕಾಗಿ ವಿವರಗಳನ್ನು ಸುಮ್ಮನೆ ಬರೆಸುವುದೂ ನಡೆಯುತ್ತಿದೆ.

ಮೇಲಿನ ಎರಡು ಕಾರಣಗಳ ಜೊತೆಗೆ ಉಚಿತವಲ್ಲದ ಪಠ್ಯಪುಸ್ತಕಗಳೂ ಅಧ್ಯಾಪಕರಿಗೆ ವೃತ್ತಿಶಿಕ್ಷಣ ಸಂಸ್ಥೆಗಳು ಸೂಕ್ತರೀತಿಯಲ್ಲಿ ನಿರ್ದೇಶನ ನೀಡದಿರುವುದೂ ಗಮನಾರ್ಹವೆನಿಸುತ್ತವೆ. ಆದ್ದರಿಂದ ಬೋಧನೆ ಉತ್ತಮಗೊಳ್ಳಬೇಕಾದರೆ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳು ಉತ್ತಮಗೊಳ್ಳಬೇಕು; ತರಗತಿಯ ಸಂಖ್ಯಾಬಲ ಕಡಿಮೆಯಾಗಬೇಕು. ಅಧ್ಯಾಪಕರಿಗೆ ದೊರಕುವ ಪ್ರತಿಶಿಕ್ಷಣವೂ ಉತ್ತಮಗೊಳ್ಳಬೇಕು. ಆಗ ತರಗತಿಯಲ್ಲಿ ಬೋಧನೆ ಹೆಚ್ಚು ಪರಿಣಾಮಕಾರಿಯೆನಿಸಬಲ್ಲದು.
ಮೇಲಿನ ಲೋಪದೋಷಗಳನ್ನು ನಿವಾರಿಸಿಕೊಳ್ಳಲು ನಿರ್ದಿಷ್ಟ ಕಾರ್ಯಕ್ರಮವನ್ನು ಸೂಚಿಸಬಹುದಾದರೂ ಅಧ್ಯಾಪಕರು ತರಗತಿಯಲ್ಲಿ ಇಂಥದೇ ಕ್ರಮವನ್ನು ಅನುಸರಿಸಬೇಕೆಂದು ಸೂಚಿಸುವುದು ಉಚಿತವೆನಿಸಲಾರದು. ಅಧ್ಯಾಪಕರು ವಿದ್ಯಾರ್ಥಿಗಳ ವಯೋಮಾನವನ್ನೂ ವಿಷಯದ ಸ್ವರೂಪವನ್ನೂ ಅನುಸರಿಸಿ ತಮಗೆ ಸೂಕ್ತವೂ ಸಾಧ್ಯವೂ ಎನಿಸುವ ಕ್ರಮವನ್ನು ಅನುಸರಿಸಬಹುದಾದ ಸ್ವಾತಂತ್ರ್ಯವನ್ನು ಹೊಂದಿರಬೇಕು. ಆದರೂ ಕೆಲವು ಮೂಲಭೂತ ತತ್ತ್ವಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ತರಗತಿಯಲ್ಲಿ ಅಧ್ಯಾಪಕರು ಸುಮ್ಮನೆ ಉಪನ್ಯಾಸ ಮಾಡದೆ ಪ್ರದರ್ಶನ ನಿದರ್ಶನಗಳ ಮೂಲಕ ವಿದ್ಯಾರ್ಥಿಗಳು ಚಟುವಟಿಕೆಯಿಂದಿದ್ದು ವಿಷಯವನ್ನು ತಿಳಿದುಕೊಳ್ಳುವಂತೆ ಮಾಡಬೇಕು. ತಿಳಿಯಾದ ಭಾಷೆಯಲ್ಲಿ ವಿವರಿಸಿ ಪರಿಶೀಲಿಸಿದ ಅಂಶಗಳ ಅಥವಾ ಪ್ರಯೋಗ ಫಲಿತಾಂಶಗಳ ಬಗ್ಗೆ ಪ್ರಶ್ನೆಗಳನ್ನು ಹಾಕಿ ವಿವೇಚನಾಪೂರ್ವಕವಾಗಿ ನಿಯಮಗಳನ್ನು ಪರಿಚಯಮಾಡಿಕೊಡಬೇಕು; ಸಮಸ್ಯೆಯ ಪರಿಚಯ, ಪರಿಶೀಲನೆ, ಹೋಲಿಕೆ, ಊಹೆ, ನಿಯಮನಿರೂಪಣೆ, ಅದರ ಸಿಂಧುತ್ವದ ಪರೀಕ್ಷೆ, ನಿಯಮದ ಅನ್ವಯಕಾರ್ಯ-ಈ ಹಂತಗಳ ಮೂಲಕ ವಿದ್ಯಾರ್ಥಿಗಳಲ್ಲಿ ವಿವೇಚನೆಯನ್ನು ಬೆಳೆಸಿ ವೈಜ್ಞಾನಿಕ ಕ್ರಮವನ್ನು ಅಭ್ಯಾಸಮಾಡಿಸಬೇಕು. ಅವಕಾಶವಾದರೆ ವಿದ್ಯಾರ್ಥಿಗಳು ವೈಯಕ್ತಿಕವಾಗಿ ಚಟುವಟಿಕೆಯಿಂದಿರಲು ಪರಿಶೀಲನೆ, ಪ್ರಯೋಗ ಇತ್ಯಾದಿ ಕಾರ್ಯಕ್ರಮಗಳನ್ನು ಏರ್ಪಡಿಸಬಹುದು. ದೊಡ್ಡ ತರಗತಿಯಲ್ಲಿ ಇವಕ್ಕೆ ಅವಕಾಶ ಇಲ್ಲದ್ದರಿಂದ ವಸ್ತುಸಂಗ್ರಹಾಲಯ, ಪ್ರಾಣಿಸಂಗ್ರಹಾಲಯ, ವನ್ಯಮೃಗಗಳ ಅರಣ್ಯಧಾಮ ಮುಂತಾದೆಡೆ ಪ್ರವಾಸ ಹೋದಾಗ ಆ ಕಾರ್ಯವನ್ನು ಮಾಡಬಹುದು. ಅಂಗರಚನಾದಿ ವೈಶಿಷ್ಟ್ಯಗಳನ್ನು ಸ್ಪಷ್ಟಪಡಿಸಲು ಚಿತ್ರಗಳನ್ನು ಹೆಚ್ಚಿಸಿ ವಿಷಯ ಜ್ಞಾನವನ್ನು ಸ್ಪಷ್ಟಪಡಿಸಲು ಏಕಕಾಲದಲ್ಲಿ ಇಡೀ ತರಗತಿಗೇ ಪ್ರದರ್ಶಿಸಲು ನೆರವಾಗುವ ಶ್ರವ್ಯದೃಶ್ಯ ಶಿಕ್ಷಣದ ಉಪಕರಣಗಳನ್ನು ಬಳಸಿಕೊಳ್ಳಬಹುದು. ಕೆಲವು ವಿಷಯಗಳನ್ನು ಹೆಚ್ಚು ವಾಸ್ತವಿಕವಾಗಿ ಬೋಧಿಸಲು ನೆರವಾಗಬಲ್ಲ ವಾಕ್ಚಿತ್ರಗಳನ್ನು ಬಳಸಬಹುದು. ಈಚೆಗೆ ಪ್ರಚಾರಕ್ಕೆ ಬಂದಿರುವ ರೇಡಿಯೋ, ಟೆಲಿವಿಷನ್ ಕಾರ್ಯಕ್ರಮಗಳನ್ನು ತರಗತಿಯ ವೇಳಾಪಟ್ಟಿಯಲ್ಲಿ ಅಳವಡಿಸಿಕೊಳ್ಳಬಹುದು.
ವಯೋಮಾನಕ್ಕೆ ತಕ್ಕ ಬೋಧನವಿಧಾನ : ಶಿಶುವಿಹಾರದ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಮುಖ್ಯವಾಗಿ ಸಸ್ಯಗಳ ಮತ್ತು ಪ್ರಾಣಿಗಳ ವಾಸಸ್ಥಳ ಅಂಗರಚನೆ, ಜೀವವಿಧಾನ ಮುಂತಾದವನ್ನು ಸಾಧ್ಯವಾದ ಮಟ್ಟಿಗೆ ಮಕ್ಕಳೇ ಪರಿಶೀಲಿಸಿ ವಿವರಿಸಲು ಅವಾಕಾಶವಿತ್ತು ಅಗತ್ಯವಾದಾಗ ನಿಸರ್ಗಕ್ರಿಯೆಗಳಲ್ಲಿ ಆಸಕ್ತಿ ಮೂಡಿಸುವುದಕ್ಕೂ ಇಂದ್ರಿಯಪಟುತ್ವವನ್ನು ವೃದ್ಧಿಪಡಿಸುವುದಕ್ಕೂ ಸೂಕ್ತರೀತಿಯಲ್ಲಿ ನಿರ್ದೇಶನ ನೀಡಬಹುದು. ಆ ಮೂಲಕ ಮುಂದೆ ಜೀವಶಾಸ್ತ್ರವನ್ನು ವ್ಯವಸ್ಥಿತ ರೀತಿಯಲ್ಲಿ ಅಭ್ಯಾಸ ಮಾಡಲು ಸರಿಯಾದ ಹಿನ್ನಲೆ ಒದಗುತ್ತದೆ. ಪ್ರೌಢಶಾಲೆಯಲ್ಲಿ ಪ್ರಯೋಗಗಳನ್ನು ನಡೆಸಿ ಅವು ಒದಗಿಸುವ ಫಲಿತಾಂಶಗಳನ್ನು ಆಧಾರಮಾಡಿಕೊಂಡು ವಿದ್ಯಾರ್ಥಿಗಳು ಸಾರ್ವತ್ರಿಕ ನಿಯಮಗಳನ್ನು ದರ್ಶಿಸುವಂತೆ ಮಾಡಬೇಕು. ಅವಕಾಶವಿರುವೆಡೆ ಪ್ರಯೋಗಗಳನ್ನು ನಡೆಸಲು ವಿದ್ಯಾರ್ಥಿಗಳಿಗೂ ಅವಕಾಶ ಕೊಡಬೇಕು. ಕಾಲೇಜಿನ ಮಟ್ಟದಲ್ಲಿ ವಿಷಯವನ್ನು ಆಳವಾಗಿ ವ್ಯಾಪಕವಾಗಿ ವ್ಯಾಸಂಗ ಮಾಡಬೇಕಾಗಿರುವುದರಿಂದ 'ಉಪನ್ಯಾಸ-ನಿದರ್ಶನ ಪಾಠಕ್ರಮ ಅವಕಾಶವನ್ನು ಕಲ್ಪಿಸಿದೆ. ಈಚೆಗೆ ಪ್ರೌಢಶಾಲೆಯಲ್ಲೂ ಈ ಕ್ರಮವನ್ನು ಅನಿವಾರ್ಯವಾಗಿ ಅನುಸರಿಸಲಾಗುತ್ತಿದೆ. ಅವುಗಳಲ್ಲಿ ಈ ಕ್ರಮವನ್ನು ಅನಿವಾರ್ಯವಾಗಿ ಅನುಸರಿಸಲಾಗುತ್ತಿದೆ. ಅವುಗಳಲ್ಲಿ ಹಲವು ಬೋಧನ ಕ್ರಮಗಳೂ ಪ್ರಚಾರಕ್ಕೆ ಬಂದಿವೆ. ಅವನ್ನು ಸ್ಥೂಲವಾಗಿ ಮುಂದೆ ವಿವರಿಸಿದೆ.

ಉಪನ್ಯಾಸ-ನಿದರ್ಶನ ಕ್ರಮ (ಲೆಕ್ಚರ್ ಡೆಮನ್ಸ್ಟ್ರೇಷನ್ ಮೆತಡ್) : ಪ್ರಾಥಮಿಕ ಶಾಲೆಗೆ ಮೇಲ್ಪಟ್ಟ ಎಲ್ಲ ತರಗತಿಗಳಲ್ಲೂ ಹೆಚ್ಚು ಪ್ರಚಾರದಲ್ಲಿರುವ ಬೋಧನ ಕ್ರಮವಿದು. ವಿಷಯವನ್ನು ವ್ಯವಸ್ಥಿತ ರೀತಿಯಲ್ಲಿ ಪರಿಚಯ ಮಾಡಿಕೊಟ್ಟು ವಿಜ್ಞಾನಜೀವನಕ್ಕೆ ಅನ್ವಯಿಸುವ ಅಂಶವನ್ನೂ ವೈಜ್ಞಾನಿಕ ಚಿತ್ರವೃತ್ತಿಯನ್ನೂ ಸಾಧಿಸಲು ಈ ಕ್ರಮ ಪರಿಣಾಮಕಾರಿಯೆನಿಸಬಲ್ಲುದು. ಇದರಲ್ಲಿ ಪೀಠಿಕೆ, ವಿಷಯ ಪ್ರವೇಶ, ಮತ್ತು ಉದ್ದೇಶನಿರೂಪಣೆ, ವಿಷಯಪ್ರದರ್ಶನ ಅಥವಾ ಪ್ರಯೋಗ ನಿದರ್ಶನ, ವಿವಿಧ ಸನ್ನಿವೇಶದಲ್ಲಿ ನಡೆಸಿದ ಆ ಪ್ರಯೋಗದ ಫಲಿತಾಂಶಗಳ ಹೋಲಿಕೆ, ಸ್ಥೂಲರೂಪದ ಪರಿಕಲ್ಪನೆ, ನಿಯಮ ನಿರೂಪಣೆ ಮತ್ತು ಅದರ ಸತ್ಯಾಪನ (ಪರೀಕ್ಷೆ) ಅಥವಾ ಅನ್ವಯಕಾಯ-ಇವು ಇದರ ಮುಖ್ಯ ಹಂತಗಳು. ಈ ವಿಧಾನ ವೈಜ್ಞಾನಿಕಕ್ರಮವನ್ನು ಸ್ಥೂಲವಾಗಿ ಆಧರಿಸಿರುವುದರಿಂದ ವಿದ್ಯಾರ್ಥಿಗಳಲ್ಲಿ ಅಂಥ ಕ್ರಮವನ್ನು ಬೆಳೆಸಲೂ ನೆರವಾಗುತ್ತದೆ. ಸಾಮಾನ್ಯವಾಗಿ ಈ ಕ್ರಮದಲ್ಲಿ ಪಾಠಮಾಡುವಾಗ ಅಧ್ಯಾಪಕರೇ ಮೊದಲಿಂದ ಕೊನೆಯವರೆಗೂ ಹೆಚ್ಚು ಚಟುವಟಿಕೆಯಿಂದಿರುವುದರಿಂದ ವಿದ್ಯಾರ್ಥಿಗಳು ನಿಷ್ಕ್ರಿಯರಾಗಿ ಕುಳಿತು ಕೇಳಬೇಕಾಗುತ್ತದೆ. ಅಥವಾ ಚಿತ್ರವನ್ನೋ ವಿವರಣೆಯನ್ನೋ ಬರೆದುಕೊಳ್ಳಬೇಕಾಗುತ್ತದೆ. ಪ್ರೌಢಶಾಲೆಯ ಮಟ್ಟದಲ್ಲಿ, ಸಾಧ್ಯವಾದರೆ ಕಾಲೇಜಿನ ಮಟ್ಟದಲ್ಲೂ ಪ್ರಶ್ನೆಗಳನ್ನು ಹಾಕಿ ಉತ್ತರ ಹೇಳಿಸುತ್ತ, ವಿದ್ಯಾರ್ಥಿಗಳು ಪ್ರಯೋಗಪ್ರದರ್ಶನ ನಿದರ್ಶನಗಳಲ್ಲಿ ಪಾತ್ರವಹಿಸುವ ಅವಕಾಶ ಕೊಡುತ್ತ ಪಾಠ ಮಾಡಿದರೆ ಇದು ಹೆಚ್ಚು ಫಲಪ್ರದವಾಗಬಲ್ಲ ವಿಧಾನ.
ಪ್ರಾಯೋಗಿಕ ಕ್ರಮ: ಪ್ರಾಣಿಗಳ ಅಥವಾ ಸಸ್ಯಗಳ ಅಂಗರಚನೆ, ಸ್ವಾಭಾವಿಕ ಜೀವನ ಮುಂತಾದ ನಿರ್ದಿಷ್ಟ ಸಮಸ್ಯೆಯನ್ನು ವಿದ್ಯಾರ್ಥಿಗಳ ಮುಂದಿಟ್ಟು ಅಗತ್ಯವಾದ ಉಪಕರಣಾದಿಗಳನ್ನು ಒದಗಿಸಿ ಸಮಸ್ಯೆಯನ್ನು ಬಿಡಿಸುವಂತೆ ಕೇಳಲಾಗುವ ಈ ಕ್ರಮದಲ್ಲಿ ವಿದ್ಯಾರ್ಥಿಗಳು ಸ್ವಪ್ರಯತ್ನದಿಂದ ಕಲಿಯುವ ಅವಕಾಶವುಂಟು. ಅಧ್ಯಾಪಕರು ಪ್ರಯೋಗಾಲಯದಲ್ಲಿ ಕಾದಿದ್ದು, ಅಂದಿಗಂದಿಗೆ ವಿದ್ಯಾರ್ಥಿಗಳ ಕೆಲಸವನ್ನು ಪರಿಶೀಲಿಸುತ್ತಿದ್ದು, ತಪ್ಪುದಾರಿ ಹಿಡಿದಾಗ ತಿದ್ದಿಕೊಡುತ್ತಿರಬೇಕು. ಈ ಕ್ರಮವನ್ನು ಪ್ರೌಢಶಾಲೆಯಲ್ಲೂ ಅನಂತರವೂ ಅನುಸರಿಸಬಹುದು. ಇದರಿಂದ ವಿದ್ಯಾರ್ಥಿಗಳು ತಮ್ಮ ಯತ್ನವನ್ನೇ ಅವಲಂಬಿಸುವ ಹಾಗೂ ವಿಜ್ಞಾನ ಮಾನವನ ಯತ್ನದಿಂದ ಬೆಳೆದು ಬಂದುದೆಂದು ಅರಿಯುವ ಅವಕಾಶವಾಗುತ್ತದೆ. ಆಗ ಸೂಕ್ತವಾದ ಮಾರ್ಗದಲ್ಲಿ ಮುನ್ನಡೆಯಬೇಕಾದ್ದರಿಂದ ವೈಜ್ಞಾನಿಕಕ್ರಮದ ಪರಿಚಯವೂ ಅಭ್ಯಾಸವೂ ದೊರಕುತ್ತದೆ. ಆದರೆ ಇದೊಂದರಿಂದಲೇ ವಿಷಯದ ವ್ಯವಸ್ಥಿತ ಜ್ಞಾನ ದೊರಕಲಾರದು. ಹಲವಾರು ವಿದ್ಯಾರ್ಥಿಗಳು ಪ್ರಯೋಗಾಲಯದಲ್ಲಿ ಪ್ರಯೋಗ ನಡೆಸುತ್ತಿರುವಾಗ ಮಂದಪ್ರಗತಿಯ ವಿದ್ಯಾರ್ಥಿ ಪಕ್ಕದ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಉತ್ತರವನ್ನು ತಿಳಿದುಕೊಂಡು ಅಧ್ಯಾಪಕರಿಗೆ ಒಪ್ಪಿಸಬಹುದಾದ್ದರಿಂದ ಇಂಥ ದೋಷಗಳನ್ನು ನಿವಾರಿಸಲು ಅಧ್ಯಾಪಕರು ತೆರೆದ ಕಣ್ಣಿನಿಂದ ಕಾದಿರಬೇಕಾಗುತ್ತದೆ.

ಈಚೆಗೆ ಸೈದ್ಧಾಂತಿಕ ಜ್ಞಾನವನ್ನು ಪ್ರಾಯೋಗಿಕ ನಿದರ್ಶನಗಳೊಡನೆ ಉಪನ್ಯಾಸ ವಿಧಾನದಲ್ಲಿ ನಿರ್ವಹಿಸಿ ಜೊತೆಗೆ ಪ್ರಯೋಗಾಲಯ ವಿಧಾನದಲ್ಲಿ ಸ್ವತಃ ಪ್ರಯತ್ನಿಸಿ ಕಲಿಯುವ ಅವಕಾಶವನ್ನು ಕಲ್ಪಿಸಿ ಅವೆರಡರ ಉತ್ತಮ ಫಲಗಳೂ ಲಭಿಸುವ ಅವಕಾಶ ಕಲ್ಪಿಸಿಕೊಳ್ಳಲಾಗುತ್ತದೆ. ಕೆಲವು ದೇಶಗಳಲ್ಲಿ ಪರ್ಯಾಯ ವಿಧಾನವೊಂದನ್ನು ಅನುಸರಿಸುತ್ತಿದ್ದಾರೆ. ಸುಮಾರು ಎಂಟು ಗಂಟೆಗಳ ಕಾಲಾವಧಿಯನ್ನು ಪಾಠಕ್ಕೆ ಗೊತ್ತು ಮಾಡಿಕೊಂಡಿದ್ದು ಮೊದಲು ಅರ್ಧಕಾಲದಲ್ಲಿ ಅಧ್ಯಾಪಕರು ಉಪನ್ಯಾಸ-ನಿದರ್ಶನ ಕ್ರಮದ ಮೂಲಕ ಪಾಠ ಮಾಡುವರು ಉಳಿದ ಕಾಲದಲ್ಲಿ ವಿದ್ಯಾರ್ಥಿಗಳು ಅದೇ ವಿಷಯವನ್ನು ಪ್ರಯೋಗಾಲಯ ವಿಧಾನದಲ್ಲಿ ಸ್ವಪ್ರಯತ್ನದಿಂದ ಹಾಗೂ ಅಧ್ಯಾಪಕರ ಮೇಲ್ವಿಚಾರಣೆಯಲ್ಲಿ ಕಲಿಯುವರು.
ಮಾದರಿ ಪ್ರಭೇಧದ ಕ್ರಮ : ಸಸ್ಯಗಳಲ್ಲೂ ಪ್ರಾಣಿಗಳಲ್ಲೂ ಅಸಂಖ್ಯಾತ ಜಾತಿಗಳೂ ಪ್ರಭೇದಗಳೂ ಇರುವುದರಿಂದ ಜೀವವರ್ಗದ ವೈವಿಧ್ಯಮಯವೆನ್ನಬಹುದಾದ ಲಕ್ಷಣಗಳನ್ನೆಲ್ಲ ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡುವುದು ಅಸಾಧ್ಯದ ಕೆಲಸವಾಗುತ್ತದೆ. ಆದ್ದರಿಂದ ಪ್ರತಿಯೊಂದು ವರ್ಗದ ಪ್ರಮುಖ ಪ್ರಾಣಿ ಅಥವಾ ಸಸ್ಯವೊಂದನ್ನು ವಿವರವಾಗಿ ಪರಿಚಯ ಮಾಡಿಕೊಡುವುದರ ಮೂಲಕ ಆ ವರ್ಗದ ಜೀವಿಗಳ ಬಗ್ಗೆ ಸಾಮಾನ್ಯ ಜ್ಞಾನವನ್ನು ಮೂಡಿಸುವುದು ಸಾಧ್ಯವಾಗುತ್ತದೆ. ಉನ್ನತ ಪ್ರೌಢಶಾಲೆಯಲ್ಲಿ ಐಚ್ಛಿಕ ಜೀವಶಾಸ್ತ್ರದ ಬೋಧನೆಗೆ ಇದು ಪರಿಣಾಮಕಾರಿಯಾದ ವಿಧಾನ, ಕಾಲೇಜಿನ ಮಟ್ಟದಲ್ಲಿ ಇದನ್ನು ಹೆಚ್ಚು ವ್ಯಾಪಕವಾಗಿ ಅನುಸರಿಸಬಹುದು.
ಇತರ ವಿಧಾನಗಳು : ಈ ಶತಮಾನದ ಮೂರನೆಯ ದಶಕದಲ್ಲಿ ಅನೇಕ ನೂತನ ಕ್ರಮಗಳು ಬಳಕೆಗೆ ಬಂದಿವೆ. ಅವುಗಳಲ್ಲಿ ಯೋಜನೆಯ ಕ್ರಮ, ಸಂಶೋಧನಕ್ರಮ, ಚರ್ಚಾಕ್ರಮ, ಮೇಲ್ವಿಚಾರಣೆಯ ವ್ಯಾಸಂಗಕ್ರಮ-ಇವು ಮುಖ್ಯವಾದುವು. ಎಲ್ಲ ವಿಷಯಗಳನ್ನೂ ಈ ಯಾವ ಒಂದೇ ವಿಧಾನದಿಂದ ಕಲಿಯುವುದು ಸಾಧ್ಯವಾಗದಿದ್ದರೂ ಕೆಲವು ವಿಷಯಗಳ ಬೋಧನೆಗೆ ಉಚಿತವಾದ್ದನ್ನು ಅನುಸರಿಸಬಹುದು. ಉದಾ: ಸೊಳ್ಳೆ, ಕಪ್ಪೆ ಮುಂತಾದ ಪ್ರಾಣಿಗಳ ಜೀವನಚರಿತ್ರೆ, ಬೀಜ ಮೊಳೆಯುವಿಕೆ, ಸಸ್ಯಗಳಲ್ಲಿ ವಂಶಾಭಿವೃದ್ಧಿ ಮುಂತಾದ ವಿಷಯಗಳನ್ನು ಯೋಜನೆಯ ವಿಧಾನ (ಪ್ರಾಜೆಕ್ಟ್ ಮೆತಡ್)ದಿಂದ ಬೋಧಿಸಬಹುದು. ವಾಸ್ತವಿಕ ಸನ್ನಿವೇಶದಲ್ಲಿ ವಿದ್ಯಾರ್ಥಿಗಳೇ ಅಗತ್ಯವೆನಿಸುವ ಏರ್ಪಾಡುಗಳನ್ನು ಮಾಡಿಕೊಂಡು ಕಲಿಯಬಹುದು. ಇದಕ್ಕೆ ದೀರ್ಘ ಕಾಲಾವಧಿ ಅಗತ್ಯವಾಗುತ್ತದೆ. ಈ ವಿಧಾನದಿಂದ ವಿದ್ಯಾರ್ಥಿಗಳು ಸ್ವಪ್ರಯತ್ನದಿಂದ ಚಟುವಟಿಕೆಯಿಂದಿದ್ದು ತಿಳಿದುಕೊಳ್ಳುವುದಲ್ಲದೆ ಆ ವಿಷಯ ಜೀವನಕ್ಕೆ ಹೇಗೆ ಸಂಬಂಧಿಸಿರುವುದೆಂಬ ಅಂಶವನ್ನೂ ಅರಿತುಕೊಳ್ಳುವರು ಎದುರು ಬರುವ ಸಮಸ್ಯೆಗಳನ್ನು ಬಿಡಿಸುವ ಶಕ್ತಿಯನ್ನೂ ಪಡೆದುಕೊಳ್ಳುವರು. ಸಂಶೋಧನ ಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆಯೊಂದನ್ನು ಕೊಟ್ಟು ಅದರ ಬಗ್ಗೆ ಅಗತ್ಯವಿವರಗಳನ್ನೋ ಪರಿಹಾರವನ್ನೋ ಕಂಡುಹಿಡಿಯಲು ಕೇಳಲಾಗುವುದು. ಅಧ್ಯಾಪಕರು ಅಲ್ಲಿ ಇದ್ದರೂ ಅಷ್ಟಾಗಿ ನೆರವು ನೀಡುವುದಿಲ್ಲ. ಉದ್ಧಾಮ ಸಂಶೋಧಕರಂತೆ ತಾವೂ ನೂತನ ಅಂಶಗಳನ್ನು ಕಂಡುಹಿಡಿಯುತ್ತೇವೆಂಬ ಆಸಕ್ತಿಯೂ ಉತ್ಸಾಹವೂ ವಿದ್ಯಾರ್ಥಿಗಳಲ್ಲಿ ಈ ಕ್ರಮ ಮೂಡಿಸಿದರೂ ಅನೇಕ ವೇಳೆ ಬರೀ ಉತ್ಸಾಹದಲ್ಲೇ ಮುಗಿಯುವ ಸಂಭವವಿದೆ. ಎಲ್ಲೋ ಕೆಲವು ಪ್ರತಿಭಾವಂತ ಹಾಗೂ ನಿಷ್ಠೆಯ ವಿದ್ಯಾರ್ಥಿಗಳು ಮಾತ್ರ ನಿಜವಾಗಿ ಕಲಿವನ್ನು ಸಾಧಿಸಬಲ್ಲರು. ಅಲ್ಲದೆ ಎಲ್ಲ ವಿಷಯಗಳ ಭೋಧನೆಗೂ ಇದು ಉಚಿತವೆನಿಸಲಾರದು. ಚರ್ಚಾಕ್ರಮದಲ್ಲಿ ವಿದ್ಯಾರ್ಥಿಗಳು ಕೊಟ್ಟ ವಿಷಯವನ್ನು ಗ್ರಂಥಗಳ ಸಹಾಯದಿಂದ ವ್ಯಾಸಂಗ ಮಾಡಿಕೊಂಡು ಬಂದು ತಮ್ಮ ತಮ್ಮ ಭಾಗಕ್ಕೆ ಕೊಟ್ಟಿರುವ ವಿಷಯವಿಭಾಗವನ್ನು ತರಗತಿಯಲ್ಲಿ ಮಂಡಿಸುವರು. ಅನಂತರ ಅಗತ್ಯವೆನಿಸಿದರೆ ಚರ್ಚೆ ನಡೆಯುವುದು. ಸಾಮೂಹಿಕ ಯತ್ನವನ್ನು ಅವಲಂಬಿಸಿರುವ ಈ ಕ್ರಮವನ್ನು ಪ್ರಾಯೋಗಿಕ ನಿದರ್ಶನ ಅಗತ್ಯವಿಲ್ಲದ ಪಾಠಗಳಿಗೆ ಅನುಕೂಲಿಸಬಹುದು. ಮೇಲ್ವಿಚಾರಣೆಯ ವ್ಯಾಸಂಗ ಕ್ರಮದಲ್ಲಿ ಉಪಾಧ್ಯಾಯರ ನೇತೃತ್ವದಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡಿ ವೈಯಕ್ತಿಕವಾಗಿ ಜ್ಞಾನಾರ್ಜನೆ ಮಾಡುವರು. ಕೆಲವು ವಿಷಯಗಳ ಬೋಧನೆಗೂ ಮಾಡಿದ ಪಾಠದ ವಿಷಯ ಜ್ಞಾನವನ್ನು ದೃಢಪಡಿಸಿಕೊಳ್ಳುವುದಕ್ಕೂ ಕಷ್ಠವಾದ್ದನ್ನು ಕೇಳಿ ತಿಳಿದುಕೊಳ್ಳುವುದಕ್ಕೂ ಈ ಕ್ರಮ ಅನುಕೂಲವೆನಿಸಬಲ್ಲದು.
ವೈಚಾರಿಕ ಬೋಧನಕ್ರಮ; ಈ ಶತಮಾನದ ಉತ್ತರಾರ್ಧದಲ್ಲಿ ಪ್ರಚಾರಕ್ಕೆ ಬಂದಿರುವ ಈ ಕ್ರಮ ಹೊಸದೇನೂ ಅಲ್ಲದಿದ್ದರೂ ಅದಕ್ಕೆ ಬಂದಿರುವ ಪ್ರಾಮುಖ್ಯದ ದೃಷ್ಟಿಯಿಂದ ಅದನ್ನಿಲ್ಲಿ ಪ್ರತ್ಯೇಕವಾಗಿ ವಿವರಿಸಿದೆ. ವಿದ್ಯಾರ್ಥಿಗಳು ನಡೆಸುವ ವಿಚಾರಣೆ ಅಥವಾ ಸಂಶೋಧನೆ ಈ ಕ್ರಮದ ಸರ್ವಸ್ವ. ವಿಜ್ಞಾನ ಬೋಧನೆಯ ಎಲ್ಲ ಕ್ರಮಗಳಲ್ಲೂ ಮುಖ್ಯವಾಗಿ ಸಂಶೋಧನ ಕ್ರಮದಲ್ಲಿ ಇದಕ್ಕೆ ಅವಕಾಶ ಇದ್ದೇ ಇದೆ. ಆದರೆ ವೈಚಾರಿಕ ಕ್ರಮ ಅವೆಲ್ಲಕ್ಕಿಂತ ಕೆಲವು ದೃಷ್ಟಿಗಳಲ್ಲಿ ಭಿನ್ನವೂ ಆಧುನಿಕವೂ ಆದುದು. ಇದು ತರಗತಿ ಮತ್ತು ಪ್ರಯೋಗಾಲಯಗಳೆರಡರಲ್ಲೂ ಹರಡಿಕೊಂಡು ನಾಲ್ಕು ಹಂತಗಳನ್ನು (ಸ್ಟೆಪ್ಸ್) ಹೊಂದಿರುತ್ತದೆ. ಮೊದಲ ಹಂತದಲ್ಲಿ ಅಧ್ಯಾಪಕರು ಪಠ್ಯಕ್ರಮದ ಪರಿಮಿತಿಯೊಳಗೆ ವಿದ್ಯಾರ್ಥಿಗಳು ಸಮಸ್ಯೆಯನ್ನು ದರ್ಶಿಸುವಂತೆ ಮಾಡಿ ಅದರ ಪರಿಹಾರಕ್ಕಾಗಿ ಪ್ರಯೋಗಾಲಯದಲ್ಲಿ ಪ್ರಯೋಗ ನಡೆಸಲು ಅವಕಾಶ ಕಲ್ಪಿಸುವರು. ಅದರಿಂದ ಪಡೆದ ಫಲಿತಾಂಶಗಳನ್ನು ಆಧಾರ ಮಾಡಿಕೊಂಡು ತೀರ್ಮಾನಕ್ಕೆ ಬರುವಂತೆ ಪ್ರೋತ್ಸಾಹಿಸುವರು. ಅದು ಅಂತಿಮ ಸ್ವರೂಪದಲ್ಲಿರಬಹುದು. ಎರಡನೆಯ ಹಂತದಲ್ಲಿ ಆ ತೀರ್ಮಾನದ ಮೇಲೆ ಚರ್ಚೆ ನಡೆಯುವುದು. ಅದು ವಿಷಯದ ಮೇಲೆ ಹೊಸ ಬೆಳಕು ಚೆಲ್ಲುವ ವ್ಯಾಸಂಗಕ್ಕೆ ಎಡೆಮಾಡಿಕೊಡುವುದು. ಅದು ತರಗತಿಯಲ್ಲಿದ್ದರೂ ನಡೆಯಬಹುದು. ಮನೆಯಲ್ಲಿದ್ದರೂ ನಡೆಯಬಹುದು. ಹಾಗೆ ಪಡೆದ ವಿವರಗಳನ್ನು ಬಳಸಿಕೊಂಡು ಪ್ರಯೋಗಾಲಯದಲ್ಲಿ ನೂತನ ವಿಧಾನದಿಂದ ಪ್ರಯೋಗ ನಡೆಸಲಾಗುವುದು. ಅಂದು ಪಡೆದ ಆಧಾರಾಂಶಗಳನ್ನು ಬಳಸಿಕೊಂಡು ಹೊಸದಾಗಿ ನಿರ್ಣಯವನ್ನು ರೂಪಿಸುವರು. ಕೊನೆಯ ಹಂತದಲ್ಲಿ ಮತ್ತೆ ತರಗತಿಯಲ್ಲಿ ವಿಷಯಕ್ಕೆ ಸಂಬಂಧಿಸಿದ ಹೆಚ್ಚಿನ ಜ್ಞಾನವನ್ನು ಅರಿತುಕೊಳ್ಳುವರು. ಈ ಬೋಧನ ಕ್ರಮ ಕಲಿಯುವ ಕ್ರಮವೂ ಆಗಿದೆ. ತಮ್ಮ ಕಲಿವಿನ ಹೊಣೆಯನ್ನು ವಿದ್ಯಾರ್ಥಿಗಳು ತಾವೇ ಹೊತ್ತಿರುತ್ತಾರೆ; ತಮ್ಮ ತೀರ್ಮಾನ ಸಾಧುವೇ ಎಂದು ಸರಿ ನೋಡುತ್ತಾರೆ. ಕ್ರಿಯಾತ್ಮಕವಾಗಿರುವ ವಿದ್ಯಾರ್ಥಿಗಳಿಗೆ ಅಧ್ಯಾಪಕರು ಸೂಕ್ತ ಸನ್ನಿವೇಶವನ್ನೂ ಉಪಕರಣಾದಿಗಳನ್ನೂ ಒದಗಿಸಿಕೊಟ್ಟು ಮಾರ್ಗದರ್ಶನ ಮಾಡುತ್ತಾರೆ. ಇದರಿಂದ ವಿಷಯಜ್ಞಾನದ ಜೊತೆಗೆ ಸಂಶೋಧಕರು ಅನುಸರಿಸಿರುವ ವೈಜ್ಞಾನಿಕ ಕ್ರಮವನ್ನು ಕಲಿಯುತ್ತಾರೆ. ವೈಜ್ಞಾನಿಕ ಚಿತ್ರವೃತ್ತಿಯನ್ನೂ ಬೆಳೆಸಿಕೊಳ್ಳುತ್ತಾರೆ. ಉತ್ತಮ ವಿಜ್ಞಾನಿಗಳನ್ನೂ ಸಂಶೋಧಕರನ್ನೂ ಸೃಷ್ಟಿಸಲು ಇದು ಉತ್ತಮ ಬೋಧನಕ್ರಮವೆಂದು ಪರಿಗಣಿಸಲಾಗಿದೆ. ಕಾಲಾವಕಾಶ, ಪ್ರಯೋಗಾಲಯ, ಹೆಚ್ಚುಮಂದಿ ಅಧ್ಯಾಪಕರು, ಉಪಕರಣಾದಿ ಸೌಲಭ್ಯ-ಈ ಕ್ರಮಕ್ಕೆ ಅಗತ್ಯ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹಾಗೂ ಪರೀಕ್ಷೆಗಳ ಮಹತ್ತ್ವ ಅಧಿಕವಾಗಿರುವ ದೇಶಗಳಲ್ಲಿ ಇದನ್ನು ಅನುಸರಿಸುವುದು ಕಷ್ಟ.

	ಯಾವ ಬೋಧನ ಕ್ರಮವನ್ನೇ ಅನುಸರಿಸಲಿ ಜೀವವಿಜ್ಞಾನದ ಬೋಧನೆಯಲ್ಲಿ ಸಾಮಾನ್ಯವಾಗಿ ಮಕ್ಕಳ ಆಲೋಚನೆ ಮೊದಲು ಅನುಗಮನರೀತಿಯಲ್ಲಿ ಸಾಗಿ ಆಧಾರಾಂಶಗಳನ್ನು ಸಂಗ್ರಹಿಸಿ ಆಮೇಲೆ ನಿರ್ಣಯದ ನಿರೂಪಣೆ ಮಾಡಬೇಕು. ಅನಂತರ ಈ ನಿರ್ಣಯವನ್ನು ಸರಿನೋಡಲು ಅಥವಾ ನಿರ್ದಿಷ್ಟ ಅಂಶಗಳನ್ನು ವಿವರಿಸಲು ಬಳಸಬೇಕು. ಮೊದಲನೆಯದು ನಿಯಮ ನಿರೂಪಣೆಯ ಭಾಗ; ಎರಡನೆಯದು ನಿಯಮ ಪ್ರಯೋಗದ ಭಾಗ. ಇವೆರಡು ಮಾರ್ಗಗಳನ್ನು ಅನುಸರಿಸಿದಾಗಲೇ ಜ್ಞಾನಚಕ್ರ ಪೂರ್ಣಗೊಳ್ಳುವುದು.

	ವೈಜ್ಞಾನಿಕ ಚಿತ್ತವೃತ್ತಿ ಮತ್ತು ವೈಜ್ಞಾನಿಕ ಕ್ರಮ : ವಿಜ್ಞಾನ ಬೋಧನೆಯ ಪ್ರಮುಖ ಫಲಗಳಾದ ಇವೆರಡನ್ನೂ ಕೆಲವರು ಒಂದಕ್ಕೊಂದಕ್ಕೆ ಪರ್ಯಾಯವಾಗಿ ಬಳಸುವುದುಂಟು. ಆದರೂ ಇವೆರಡಕ್ಕೂ ವಿಭೇದ ಕಲ್ಪಿಸುವುದು ಅಗತ್ಯ. ವೈಜ್ಞಾನಿಕ ಕ್ರಮ ಅನುಸರಿಸಬೇಕಾದ ಒಂದು ಕಾರ್ಯವಿಧಾನ ಅಥವಾ ತಂತ್ರ; ವೈಜ್ಞಾನಿಕ ಚಿತ್ತವೃತ್ತಿ ಆ ವಿಧಾನವನ್ನು ಅನುಸರಿಸಲು ಅಗತ್ಯವಾಗಿ ಬೇಕಾದ ಮನೋಭಾವ. ಇವೆರಡೂ ಒಂದನ್ನೊಂದು ಅವಲಂಬಿಸಿಕೊಂಡೇ ಮಕ್ಕಳಲ್ಲಿ ವೃದ್ಧಿಯಾಗಬೇಕು. ಸಮಸ್ಯೆಯನ್ನು ಪರಿಹರಿಸುವಾಗ ಆಧಾರಾಂಶಗಳನ್ನು ಸಂಗ್ರಹಿಸಿ, ಅವುಗಳಲ್ಲಡಗಿರುವ ಸಂಬಂಧವನ್ನು ದರ್ಶಿಸುವಂತೆ ಮಾಡಿ ಅದರ ಆಧಾರದ ಮೇಲೆ ಊಹೆಯೊಂದನ್ನು ರೂಪಿಸಿ, ಅನಂತರ ಅದರ ಯಥಾರ್ಥತೆಯನ್ನೂ ಸಾರ್ವತ್ರಿಕತೆಯನ್ನೂ ಪರೀಕ್ಷಿಸಿ ನೋಡಿ ಕೊನೆಗೆ ಸಾರ್ವತ್ರಿಕ ನಿಯಮವೊಂದನ್ನು ಕಂಡುಕೊಳ್ಳಲು ವಿದ್ಯಾರ್ಥಿಗಳಿಗೆ ನೆರವಾಗುವುದರ ಮೂಲಕ ಅಧ್ಯಾಪಕರು ವೈಜ್ಞಾನಿಕ ಕ್ರಮವನ್ನು ಪರಿಚಯ ಮಾಡಿಕೊಡಬಹುದು. ಜೀವವಿಜ್ಞಾನದ ಸಂಪ್ರತ್ಯಯಗಳನ್ನು ರೂಪಿಸುವಾಗ ಆ ಸಂಪ್ರತ್ಯಯಗಳಲ್ಲಿ ಸಂಬಂಧ ಕಲ್ಪಿಸಿ ಸೂತ್ರ, ನಿಯಮ, ಸಿದ್ಧಾಂತ ಮುಂತಾದವನ್ನು ರೂಪಿಸುವಾಗಲೂ ಆ ಕಾರ್ಯವನ್ನು ಸಾಧಿಸಬಹುದು. ಅಂದಿಗಂದಿಗೆ ಆ ಕ್ರಮದ ಮಜಲುಗಳ ಮೂಲಕ ಆಲೋಚನೆಯನ್ನು ನಿರ್ದೇಶಿಸುವುದರಿಂದಲೂ ಆ ಕ್ರಮ ಅದರ ಜೀವನದಲ್ಲಿ ಅಂತರ್ಗತವಾಗುವಂತೆ ಮಾಡಬಹುದು. ಆದರೆ ವೈಜ್ಞಾನಿಕ ಅಂಶಗಳನ್ನು ಬೋಧಿಸುವಾಗ ಆ ಚಿತ್ತವೃತ್ತಿ ಬೆಳೆಸುವುದು ಅಷ್ಟು ಸುಲಭವಲ್ಲ. ವೈಜ್ಞಾನಿಕ ಅಂಶಗಳನ್ನು ಬೋಧಿಸುವಾಗ ಆ ಚಿತ್ತವೃತ್ತಿ ಬೆಳೆಯುವುದೆಂದು ಸಾಮಾನ್ಯವಾಗಿ ಹೇಳಿದರೂ ಉದ್ದೇಶಪೂರ್ವಕವಾಗಿಯೂ ಆ ಕಾರ್ಯಕ್ಕೆ ಗಮನಕೊಡಬೇಕಾಗುತ್ತದೆ.

	ವೈಜ್ಞಾನಿಕ ಚಿತ್ರವೃತ್ತಿ ಒಂದು ಸರಳ ಮನೋಭಾವವಲ್ಲ; ಹಲವಾರು ಮನೋಭಾವಗಳು ಸೇರಿ ಕಾರ್ಯಮುಖವಾಗುವ ಒಂದು ಸಂಕೀರ್ಣ ಮನೋವ್ಯಾಪಾರ. ಜನಜನಿತವಾಗಿರವ ನಂಬಿಕೆಗಳಲ್ಲಿ ಸಂದೇಹಿಸುವ ಪ್ರಕೃತಿ. ಅದರ ಬಗ್ಗೆ ಸತ್ಯಾಂಶವನ್ನು ದರ್ಶಿಸಬಹುದೆಂಬ ನಂಬಿಕೆ, ಪ್ರಾಯೋಗಿಕವಾಗಿ ಪರೀಕ್ಷಿಸಿ ನೋಡುವ ಹಂಬಲ, ನಿಷ್ಕøಷ್ಟತೆಯಲ್ಲಿ ಪಕ್ಷಪಾತ, ನೂತನ ಅಂಶಗಳ ಬಗ್ಗೆ ಸ್ವಾಗತ. ತನ್ನ ಪೂರ್ವಾಭಿಪ್ರಾಯಗಳನ್ನು ಮಾರ್ಪಡಿಸಿಕೊಳ್ಳಲು ಹಿಂಜರಿಯದಿರುವಿಕೆ. ವಸ್ತುನಿಷ್ಠಾವಿಧಾನದಲ್ಲಿ ಸಾಗಬೇಕೆಂಬ ದೃಷ್ಟಿಕೋನ, ಮೌಢ್ಯರ ಬಗ್ಗೆ ತಿರಸ್ಕಾರ, ವೈಜ್ಞಾನಿಕ ವಿವರಗಳಲ್ಲಿ ಆಸಕ್ತಿ, ಜ್ಞಾನದ ಪೂರ್ಣತೆಯಲ್ಲಿ ಅಭಿಮಾನ, ತೀರ್ಮಾನ ಕೈಗೊಳ್ಳುವಾಗ ಎಚ್ಚರಿಕೆ, ಊಹೆಗಳನ್ನೇ ತೀರ್ಮಾನಗಳೆಂದು ಭ್ರಮಿಸುವ ಮನೋಧರ್ಮ, ಯಾವುದು ಮೂಲಭೂತ, ಯಾವುದು ಸಾರ್ವತ್ರಿಕ, ಯಾವುದು ಸಾರ್ಥಕ ಎಂಬ ಪರಿಜ್ಞಾನ, ಸೈದ್ಧಾಂತಿಕ ರಚನೆಯಲ್ಲಿ ನಂಬಿಕೆ, ಪ್ರಮಾಣೀಕರಿಸಿ ಮುಂದುವರಿಯುವುದರಲ್ಲಿ ದೃಢವಾದ ವಿಶ್ವಾಸ, ಸಂಭವನೀಯತೆಗಳ ಬಗ್ಗೆ ಸಂಶಯರಾಹಿತ್ಯ, ಸಾಧಾರವೆನಿಸಿರುವ ಸಾರ್ವತ್ರೀಕರಣವನ್ನು ಒಪ್ಪಿ ಬರಮಾಡಿಕೊಳ್ಳುವುದು, ಸತ್ಯದ ಬಗ್ಗೆ ನಿಷ್ಠೆ-ಇವೆಲ್ಲ ವೈಜ್ಞಾನಿಕ ಚಿತ್ತವೃತ್ತಿಯಲ್ಲಿ ಸೇರಿವೆ. ಅಂಥ ಸಂಕೀರ್ಣ ಉದ್ದೇಶವನ್ನು ಸಾಧಿಸುವಾಗ ಅಧ್ಯಾಪಕರು ಮುಂದಿನ ಅಂಶಗಳನ್ನು ಗಮನದಲ್ಲಿಡುವುದು ಅಗತ್ಯ.

	ವೈಜ್ಞಾನಿಕ ಚಿತ್ತವೃತ್ತಿಗೆ ಸೇರಿರುವ ಬೇರೆಬೇರೆ ಅಂಶಗಳನ್ನು ಅಧ್ಯಾಪಕರು ಪರಿಚಯ ಮಾಡಿಕೊಂಡಿರಬೇಕು; ಆಯಾ ಮನೋಭಾವವನ್ನು ಪ್ರತಿನಿಧಿಸುವ ಪಾರಿಭಾಷಿಕಗಳನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡಬೇಕು; ಗೊಂದಲದ ಸನ್ನಿವೇಶದಲ್ಲಿ ಕಂಡುಬರುವ ಸಮಸ್ಯೆಯನ್ನು ದರ್ಶಿಸುವುದು, ಸ್ಪಷ್ಟೀಕರಿಸುವುದು, ಪರಿಹಾರಕ್ಕೊಂದು ಪರಿಕಲ್ಪನೆಯನ್ನು ಕಟ್ಟುವುದು, ಅದನ್ನು ಆಧರಿಸಿ ವಿಚಾರಣೆ ನಡೆಸುವುದು, ಆಧಾರಾಂಶಗಳ ಸಂಗ್ರಹಣೆ, ಸಂಸ್ಕರಣ ಮತ್ತು ಅರ್ಥಕಲ್ಪನೆ, ನಿಯಮನಿರೂಪಣೆ ಅಥವಾ ಅನುಮಿತಿಕಾರ್ಯ, ಅದನ್ನು ಇತರರಿಗೆ ತಿಳಿಯಪಡಿಸುವುದು-ಇವಕ್ಕೆ ಸಂಬಂಧಿಸಿದಂತೆ ಹಿರಿಯ ಜೀವವಿಜ್ಞಾನಿಗಳು ತಳೆದಿದ್ದ ಮನೋಭಾವಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು; ಆ ಮನೋಭಾವವನ್ನು ಅವರೂ ಅನುಸರಿಸಬೇಕೆಂದು ಸಲಹೆ ನೀಡಬೇಕು; ಆಯಾ ಮನೋಭಾವವನ್ನು ಪ್ರದರ್ಶಿಸಿದ ಐತಿಹಾಸಿಕ ವ್ಯಕ್ತಿಗಳ, ಅಧ್ಯಾಪಕರ, ಹಿರಿಯರ ಅಥವಾ ಇತರರ ಆದರ್ಶಗಳನ್ನು ಅವರಿಗೆ ಪರಿಚಯ ಮಾಡಿಕೊಡಬೇಕು; ಅಂಥ ಮನೋಭಾವಗಳನ್ನು ಚಿತ್ರಿಸುವಾಗ ವಿಹಿತ ಸಂವೇಗಾತ್ಮಕ ಸನ್ನಿವೇಶವನ್ನು ಮೂಡಿಸಬೇಕು. ಸಾಮೂಹಿಕ ಪ್ರೇರಣೆಯಿಂದ ವ್ಯಕ್ತಿ ಆ ಮನೋಭಾವವನ್ನು ಸ್ವೀಕರಿಸುವಂತೆ ಸಾಮೂಹಿಕ ಸನ್ನಿವೇಶವನ್ನು ಸೃಷ್ಟಿಸಬೇಕು. ವೈಜ್ಞಾನಿಕವಲ್ಲದ ಅಹಿತ ಮನೋಭಾವಗಳನ್ನು ರೂಢಿಸಬೇಕು. ಜೊತೆಗೆ ಅಧ್ಯಾಪಕರು ತಮ್ಮ ಭಾವಪ್ರದರ್ಶನದ ಮೂಲಕ ಸೂಕ್ತರೀತಿಯ ಮೇಲ್ಪಂಕ್ತಿಯನ್ನು ಒದಗಿಸಬೇಕು. ಇದು ತೀರ ಅಗತ್ಯ. ಏಕೆಂದರೆ ಅಧ್ಯಾಪಕರು ತಾವೇ ಅನುಸರಿಸದ ಭಾವಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು ಕಷ್ಟ.

	ವೈಜ್ಞಾನಿಕ ಚಿತ್ರವೃತ್ತಿಯನ್ನು ಬೆಳೆಸಲು ಭೌತರಸಾಯನಶಾಸ್ತ್ರಗಳ ಬೋಧನೆಯಿಂದ ಮಾತ್ರ ಸಾಧ್ಯವೆಂದು ಕೆಲವರು ಹೇಳುವರು. ಇದು ಆಧಾರವಿಲ್ಲದ ಮಾತು ಆ ಕಾರ್ಯಕ್ಕೆ ಜೀವಶಾಸ್ತ್ರದ ಬೋಧನೆಯೂ ಅಷ್ಟೆ ಪರಿಣಾಮಕಾರಿಯಾಗಬಲ್ಲುದು.
(ಎನ್.ಎಸ್.ವಿ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ